ಮಾರ್ಷಲ್, ಆಲ್ಫ್ರೆಡ್
1842-1924. ಪ್ರಸಿದ್ಧ ಅರ್ಥಶಾಸ್ತ್ರಜ್ಞ. ಲಂಡನ್ನಿನಲ್ಲಿ 1842 ಜುಲೈ 26 ರಂದು ಜನನ. ಮರ್ಚೆಂಟ್ ಟೇಲರ್ಸ್ ಶಾಲೆಯಲ್ಲಿ ಓದು ಮುಂದೆ ವಿಶ್ವವಿದ್ಯಾಲಯದ ಕೇಂಬ್ರಿಜ್ ಸೇಂಟ್ ಜಾನ್ಸ್ ಕಾಲೇಜಿನ ಉನ್ನತ ಶಿಕ್ಷಣ ಪಡೆದು ಗಣಿತದಲ್ಲಿ ಪದವಿ ಪಡೆದ. 1865ರಲ್ಲಿ ಫೆಲೊ ಆದ ಮಾರ್ಷಲ್ ಅದೇ ವರ್ಷ ಕೇಂಬ್ರಿಜ್‍ನಲ್ಲಿ ನೀತಿಶಾಸ್ತ್ರದ ಉಪನ್ಯಾಸಕನಾಗಿ ನೇಮಕಗೊಂಡ. ಮಾರ್ಷಲ್ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡತೊಡಗಿದ್ದು ಇದೇ ಕಾಲದಲ್ಲಿ. ಬ್ರಿಸ್ಟಲ್‍ನ ಯೂನಿವರ್ಸಿಟಿ ಕಾಲೇಜಿನ ಪ್ರಥಮ ಪ್ರಾಂಶುಪಾಲನೂ ಆದ (1877-81). 1883ರಲ್ಲಿ ಮಾರ್ಷಲ್ ಬಾಲಿಯೋಲ್‍ನಲ್ಲಿ ಅರ್ಥನೀತಿಯ (ಪೊಲಿಟಿಕಲ್ ಎಕಾನಮಿ) ಮುಖ್ಯಸ್ಥನಾಗಿ ನೇಮಿಸಲ್ಪಟ್ಟ. 1885 ರಲ್ಲಿ ಮಾರ್ಷಲ್ ಮತ್ತೆ ಕೇಂಬ್ರಿಜ್‍ಗೆ ಮರಳಿ ಅರ್ಥನೀತಿಯ ಪ್ರಾಧ್ಯಾಪಕನಾಗಿ ನೇಮಕಗೊಂಡ. 1908ರಲ್ಲಿ ನಿವೃತ್ತಿ ಹೊಂದುವ ತನಕ ಈ ಹುದ್ದೆಯಲ್ಲಿ ಮುಂದುವರಿದ. 1891-94ರ ಅವಧಿಯಲ್ಲಿ ಕಾರ್ಮಿಕ ಆಯೋಗದ ಸದಸ್ಯನಾಗಿದ್ದು ಅನಂತರ ಸರ್ಕಾರದ ವಿವಿಧ ಕಾರ್ಯಗಳಲ್ಲಿ ನೆರವು ನೀಡುತ್ತಿದ್ದ ಮಾರ್ಷಲ್ ನಿವೃತ್ತಿಯ ಅನಂತರವೂ ಅರ್ಥಶಾಸ್ತ್ರದ ಅಧ್ಯಯನ, ಚಿಂತನ ಹಾಗೂ ಬರೆಹವನ್ನು ಮುಂದುವರಿಸಿದ್ದ. ಮಾರ್ಷಲನ ಅತ್ಯಂತ ಮುಖ್ಯಕೃತಿಗಳೆಂದರೆ ದ ಪ್ಯೂರ್ ತಿಯೊರಿ ಆಫ್ ಫಾರಿನ್ ಟ್ರೇಡ್ (1879). ದ ಪ್ರಿನ್ಸಿಪಲ್ಸ್ ಆಫ್ ಎಕನಾಮಿಕ್ಸ್ (1890), ಇಂಡಸ್ಟ್ರಿ ಅಂಡ್ ಟ್ರೇಡ್ (1919) ಮತ್ತು ಮನಿ, ಕ್ರೆಡಿಟ್ ಅಂಡ್ ಕಾಮರ್ಸ್ (1923).

ಮಾರ್ಷಲ್ ಇಂಗ್ಲಿಷ್ ಅಭಿಜಾತ ಪಂಥದ ಪರಂಪರೆಯನ್ನು ಮುಂದುವರಿಸಿದ. ಆಡಮ್ ಸ್ಮಿತ್ ಮತ್ತು ಡೇವಿಡ್ ರಿಕಾರ್ಡೊ ಈ ಪಂಥದ ಪ್ರವರ್ತಕರು. ತನ್ನ ಅನಂತರದ ಅರ್ಥಶಾಸ್ತ್ರಜ್ಞರ ಮೇಲೆ ಮಾರ್ಷಲ್ ಬೀರಿದ ಪ್ರಭಾವ ಅಪಾರ. ವ್ಯಷ್ಟಿ ಅರ್ಥಶಾಸ್ತ್ರ ಸಿದ್ಧಾಂತವನ್ನು ಕುರಿತಂತೆ ಇವನ ಹಿಂದಿನವರ ಚಿಂತನೆಗಳನ್ನೆಲ್ಲ ಕ್ರೋಢೀಕರಿಸಿ ಅದಕ್ಕೊಂದು ರೂಪಕೊಟ್ಟ. ಸ್ಮಿತ್, ಜಾನ್ ಸ್ಟುಯರ್ಟ್ ಮಿಲ್ ಇದರ ಸಿದ್ಧಾಂತಗಳನ್ನು ಪರಿಪೂರ್ಣಗೊಳಿಸಲು ಇವನು ತನ್ನ ಕ್ರಮಬದ್ಧವಿಧಾನಗಳನ್ನು ಮಂಡಿಸಿದ. ತಾರ್ಕಿಕ ವಿಶ್ಲೇಷಣೆಯ ವಿಧಾನಗಳಿಂದಲೂ ಹಲವಾರು ಹೊಸ ಪರಿಕಲ್ಪನೆಗಳ ಪರಿಚಯದಿಂದಲೂ ಮಾರ್ಷಲ್ ಅರ್ಥಶಾಸ್ತ್ರದ ಬೆಳವಣಿಗೆಗಳಲ್ಲಿ ಮಹತ್ತ್ವದ ಪಾತ್ರವಹಿಸಿದ.

ತನ್ನ ಇಪ್ಪತ್ತ ಮೂರು ವರ್ಷಕಾಲದ ಪ್ರಾಧ್ಯಾಪಕ ವೃತ್ತಿಯ ಅವಧಿಯಲ್ಲಿ ಮೂರು ಮುಖ್ಯ ಚಳವಳಿಗಳಲ್ಲಿ ಮಾರ್ಷಲ್ ಸೇರಿದ್ದ. ಬ್ರಿಟಿಷ್ ಎಕನಾಮಿಕ್ಸ್ ಅಸೋಸಿಯೇಷನ್, ಕೇಂಬ್ರಿಜ್ಜಿನ ಸ್ತ್ರೀಪದವೀಧರರ ಪ್ರಶ್ನೆ ಮತ್ತು ಕೇಂಬ್ರಿಜ್ ಟ್ರಿಪೋಸ್ ಚಳವಳಿಗಳಲ್ಲಿ ಈತ ಸಕ್ರಿಯವಾದ ಪಾತ್ರವಹಿಸಿದ್ದ. ಆಗ್ಗೆ ಕಾಲೇಜುಗಳಲ್ಲಿ ಸಾಮಾಜಿಕ ಶಾಸ್ತ್ರಗಳ ಅಂಗವಾಗಿ ಅರ್ಥಶಾಸ್ತ್ರ ಪ್ರತ್ಯೇಕವಾದ ಸ್ಥಾನ ಹಾಗೂ ಮಹತ್ತ್ವ ಪಡೆದಿರಲಿಲ್ಲ. ಇತರ ಶಾಸ್ತ್ರಗಳಂತೆಯೇ ಅರ್ಥಶಾಸ್ತ್ರವೂ ಸ್ವತಂತ್ರವಾದ ಹಾಗೂ ಪ್ರಮುಖವಾದ ಶಾಸ್ತ್ರವೆಂದು ವಿಶ್ವವಿದ್ಯಾಲಯಗಳು ಪರಗಣಿಸುವಂತೆ ಮಾಡಲು ಯತ್ನಿಸಿದ ಕೀರ್ತಿ ಮಾರ್ಷಲನದು.

ಅರ್ಥಶಾಸ್ತ್ರದ ಆವಿಷ್ಕಾರದಲ್ಲಿ ಮೂಲಸಿದ್ಧಾಂತಗಳ ಬೆಳವಣಿಗೆಯಲ್ಲಿ ಈತನ ಪಾತ್ರ ಬಲುಮುಖ್ಯವಾದ್ದು. ಅರ್ಥಶಾಸ್ತ್ರದ ಮೀಮಾಂಸೆ ಕುರಿತ ಈತನ ಆಳವಾದ ಅಧ್ಯಯನ 1867ರಲ್ಲಿ ಪ್ರಾರಂಭವಾಯಿತು. 1875ರಲ್ಲಿ ಇವನ ಮುಖ್ಯವಾದ ಮೀಮಾಂಸೆಗಳು ರೂಪುಗೊಂಡಿದ್ದವು. 1883ರಲ್ಲಿ ಅವು ಅಂತಿಮ ರೂಪ ಪಡೆದವು. ಆದರೆ 1890ರಲ್ಲಿ ಇವನ ಪ್ರಿನ್ಸಿಪಲ್ಸ್ ಆಫ್ ಎಕನಾಮಿಕ್ಸ್ ಪ್ರಕಟವಾದಾಗ ಮಾತ್ರ ಪ್ರಪಂಚ ಮಾರ್ಷಲ್‍ನ ಮಹತ್ತ್ವಪೂರ್ಣ ಪ್ರತಿಭೆಯನ್ನು ಅರಿಯಿತು. ಆ ವೇಳೆಗಾಗಲೇ ಮಿಲ್ಲನ ಪೊಲಿಟಿಕಲ್ ಎಕಾನಮಿ, ಕಾರ್ಲ್ ಮಾಕ್ರ್ಸ್‍ನ ಕ್ಯಾಪಿಟಲ್, ಜೆವನ್ಸನ ತಿಯೊರಿ ಆಫ್ ಪೊಲಿಟಿಕಲ್ ಎಕಾನಮಿ ಮುಂತಾದ ಗ್ರಂಥಗಳು ಬೆಳಕು ಕಂಡಿದ್ದವು. ಮಾರ್ಷಲನ ಪ್ರಿನ್ಸಿಪಲ್ಸ್ ಆಫ್ ಎಕನಾಮಿಕ್ಸ್-ಈ ಸಾಲಿಗೆ ಸೇರಿದ ಸುಪ್ರಸಿದ್ಧ ಶಾಸ್ತ್ರೀಯ ಗ್ರಂಥವೆನಿಸಿತು. 

ಮಾರ್ಷಲ್ ಆರ್ಥಿಕ ಮಾನವನ ಸಂಕುಚಿತ ಕಲ್ಪನೆಯನ್ನು ಟೀಕಿಸಿದರೂ ವ್ಯಾಪಾರ ವಹಿವಾಟಿನ ವಿವರಣೆಯಲ್ಲಿ ಈ ಕಲ್ಪನೆಯನ್ನು ತ್ಯಜಿಸಲಿಲ್ಲ. ಅದರ ಕಾರಣ ಅಲ್ಲಿ ಲಾಭನಷ್ಟಗಳೆ ನಿರ್ಮಾಯಕಗಳಾಗಿರುತ್ತವೆ. ಸ್ಪರ್ಧೆಯನ್ನು ಇವನು ಪ್ರತಿಪಾದಿಸಿದರೂ ಅಂಥ ಆರ್ಥಿಕ ವ್ಯವಸ್ಥೆಗೆ ಒಳ್ಳೆಯ ಗುಣಗಳಿರುವಂತೆಯೇ ಕೆಟ್ಟ ಗುಣಗಳೂ ಇವೆಯೆಂದು ಒಪ್ಪಿದ. ಅಲ್ಲಿ ಇವನು ಸಂಯೋಜನೆ ಹಾಗೂ ಸಹಕಾರದ ಪರಿಹಾರವನ್ನು ಸೂಚಿಸಿದ್ದಾನೆ. ನಮ್ಮ ಆರ್ಥಿಕ ವ್ಯವಸ್ಥೆಯನ್ನು ವಿವರಿಸಲು ಮಾರ್ಷಲ್ ಉಪಯೋಗಿಸಿದ ಪದಪ್ರಯೋಗಗಳು ಇವನ ನಿರೂಪಣೆಯ ಸ್ಪಷ್ಟತೆಗೆ ಸಾಕ್ಷಿಗಳಾಗಿವೆ. ಮಾರ್ಷಲನ ಅಭಿಪ್ರಾಯದಲ್ಲಿ ಇಂದಿನ ಅರ್ಥವ್ಯವಸ್ಥೆ ಸ್ಪರ್ಧಾತ್ಮಕ ಪದ್ಧತಿಯದಲ್ಲ. ಅದು ಕೈಗಾರಿಕೆ ಹಾಗೂ ಉದ್ಯಮಸ್ವಾತಂತ್ರ್ಯ ಇರುವ ಪದ್ಧತಿ. ಬಡತನ ದೋಷಗಳು ಇವನ ದೃಷ್ಟಿಗೆ ಬೀಳಲಿಲ್ಲ. ದಾರಿದ್ರ್ಯದ ನಿವಾರಣೆಯಾಗಬೇಕೆಂದು ಬಯಸಿದ. ಆದರೆ ಖಾಸಗಿ ಹಾಗೂ ವೈಯಕ್ತಿಕ ಸಂಪತ್ತಿನ ಪ್ರಯೋಜನಗಳನ್ನೂ ಇವನು ಅರ್ಥಮಾಡಿಕೊಂಡಿದ್ದ. ಅದರ ನಾಶದಿಂದ ದಾರಿದ್ರ್ಯದ ಪರಿಹಾರ ಸಾಧ್ಯವಿಲ್ಲವೆಂಬುದು ಇವನ ಅಭಿಪ್ರಾಯವಾಗಿತ್ತು. ಸಾರ್ವಜನಿಕ ಹಿತಕ್ಕಾಗಿ ಸಂಪತ್ತಿನ ವಿನಿಯೋಗವೇ ಇವನ ಆದರ್ಶವೆನಿಸಿತ್ತು. ಮಾರ್ಷಲ್ ಸುಧಾರಣೆಯ ವಿರೋಧಿಯಾಗಿರಲಿಲ್ಲ. ಇವನ ಅಭಿಪ್ರಾಯದಲ್ಲಿ ಸುಧಾರಣೆ ಇಚ್ಛಿಸುವಂಥದೇ. ಆದರೆ ಹೆಚ್ಚಿನ ಸುಧಾರಕರು ಬಹಳ ಅವಸರ ಮಾಡುವ ಪ್ರವೃತ್ತಿಯವರೆಂಬುದು ಮಾರ್ಷಲನ ಅಭಿಪ್ರಾಯ.

ಆಡಮ್‍ಸ್ಮಿತ್ ಹಾಗೂ ಮಿಲ್ಲರ್ ಪುಸ್ತಕಗಳಂತೆ ಮಾರ್ಷಲನ ಗ್ರಂಥ ಜನಪ್ರಿಯವಾಗಲಿಲ್ಲ. ಆದರೆ ಅರ್ಥಶಾಸ್ತ್ರದ ಬೆಳವಣಿಗೆಗೆ ಸಂಬಂಧಿಸಿದಂತೆ ಹೊಸ ಪರಿಕಲ್ಪನೆಗಳನ್ನೊದಗಿಸಿ ವಿವರಣೆಗಳನ್ನು ಈ ಮಹಾ ಅರ್ಥಶಾಸ್ತ್ರಜ್ಞ, ಹತ್ತೊಂಭತ್ತನೆಯ ಶತಮಾನದ ಶ್ರೇಷ್ಠ ಬುದ್ಧಿವಂತರನ್ನು ಇತರರಿಂದ ಬೇರ್ಪಡಿಸಿ ಸಿದ್ಧಾಂತವಾದರಿಂದ ಅರ್ಥಶಾಸ್ತ್ರವನ್ನು ವಿಮೋಚನೆಗೊಳಿಸಿ ಅದಕ್ಕೆ ವಿಶಾಲವಾದ ಅರ್ಥವನ್ನೊದಗಿಸಿದ. ರಾಷ್ಟ್ರೀಯ ವರಮಾನ, ಬೇಡಿಕೆಯ ಸ್ಥಿತಿಸ್ಥಾಪಕತ್ವ, ಅನುಭೋಗಿ ಹೆಚ್ಚಳ, ಅರೆ-ಗೇಣಿ, ಪ್ರಾತಿನಿಧಿಕ ಉದ್ಯಮಸಂಸ್ಥೆ ಮುಂತಾದ ಹೊಸ ಆರ್ಥಿಕ ಪರಿಕಲ್ಪನೆ, ಇವನ್ನು ಮಾರ್ಷಲ್ ಪ್ರಚಾರಕ್ಕೆ ತಂದ.
ಮಾರ್ಷಲ್ ತನ್ನ ಪಾಠಪ್ರವಚನಗಳಲ್ಲಿ, ಭಾಷಣಗಳಲ್ಲಿ, ಬರೆಹಗಳಲ್ಲಿ ಮತ್ತು ಪುಸ್ತಕ ವಿಮರ್ಶೆಗಳಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ವ್ಯಕ್ತಪಡಿಸಿದ್ದಾನೆ. ಸಮಾಜವಾದ ಸಿದ್ಧಾಂತಗಳನ್ನೊಪ್ಪದಿದ್ದರೂ ಮಾರ್ಷಲ್ ಕೂಲಿಗಾರರ ಚಳವಳಿಯಲ್ಲಿ ಅತ್ಯಂತ ಆಸಕ್ತಿವಹಿಸಿದ್ದ. ಅದರ ಮುಂದಾಳುಗಳ ಸಂಪರ್ಕವನ್ನಿಟ್ಟುಕೊಂಡಿದ್ದ. ಕಾರ್ಮಿಕ ಸಂಘಗಳ ಬಗೆಗೂ ಇವನು ತುಂಬ ಅಭ್ಯಾಸಮಾಡಿದ್ದ. ಇಂಗ್ಲೆಂಡಿಗೆ ಆಗಿನ ಐ.ಸಿ.ಎಸ್. ಪರೀಕ್ಷಾರ್ಥಿಗಳಾಗಿ ಹೋಗುತ್ತಿದ್ದ ಭಾರತೀಯರಿಗೆ ಈತ ಪ್ರವಚನ ನೀಡುತ್ತಿದ್ದು ಭಾರತದ ಆರ್ಥಿಕ ಹಾಗೂ ಹಣಕಾಸನ್ನು ಕುರಿತಾದ ಸುಧಾರಣೆಯಲ್ಲಿ ಬಹಳವಾದ ಆಸಕ್ತಿ ಇಟ್ಟಿದ್ದ. ಮೌಲ್ಯಸಿದ್ಧಾಂತದ ಅಸ್ಪಷ್ಟತೆಯನ್ನು ಬಗೆಹರಿಸಿದ. ಅಂತೆಯೇ ವಿಶ್ಲೇಷಣೆಯಲ್ಲಿ ಕಾಲದ ಆಯಾಮವನ್ನು ಅಳವಡಿಸುವ ಅಗತ್ಯವನ್ನು ವ್ಯಕ್ತಪಡಿಸಿದ ಕೀರ್ತಿಯೂ ಮಾರ್ಷಲನಿಗೆ ಸಲ್ಲಬೇಕು. ವಿಲಿಯಮ್ ಜೆವನ್ಸ್ ಮತ್ತು ಆಸ್ಟ್ರಿಯನ್ ಪಂಥದವರ ಪರಿಸರದ ಉಪಯುಕ್ತತಾ ಸಿದ್ಧಾಂತವನ್ನು ಉತ್ಪಾದನ ವೆಚ್ಚ ಸಿದ್ಧಾಂತದೊಂದಿಗೆ ಹೊಂದಿಸಿದ್ದೂ ಮಾರ್ಷಲನ ಪ್ರತಿಭೆಗೆ ಸಾಕ್ಷಿಯಾಗಿದೆ. ಆರ್ಥಿಕ ತರ್ಕಸರಣಿ ಮತ್ತು ಅದರ ನಿಯಮಗಳೇ ಸ್ವಯಂಪೂರ್ಣ ಸತ್ಯವಲ್ಲ. ಅವು ಪೂರ್ಣವಾಗಿರುವ ಸತ್ಯವನ್ನು ಅನ್ವೇಷಣೆ ಮಾಡುವ ಸಾಧನಗಳು ಮಾತ್ರ ಎಂಬುದನ್ನು ಮಾರ್ಷಲ್ ಸ್ಪಷ್ಟಪಡಿಸಿದ.
(ಆರ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ